ಕೂಚ್‍ಬಿಹಾರ್ ಟ್ರೋಫಿ

	ಭಾರತದ ಕ್ರಿಕೆಟ್ ನಿಯಂತ್ರಣ ಮಂಡಲಿಯವರು 1952-53ರಿಂದ ನಡೆಸುತ್ತಿರುವ ಅಖಿಲ ಭಾರತ ಅಂತರ ವಲಯ ಶಾಲೆಗಳ ಕ್ರಿಕೆಟ್ ಅಗ್ರೇಸರತ್ವ ಕ್ರೀಡಾಸ್ಪರ್ಧೆಯ (ಚಾಂಪಿಯನ್‍ಷಿಪ್ ಟೂರ್ನಿ) ಪಾರಿತೋಷಕ. ಶಾಲಾಮಟ್ಟದಲ್ಲಿ ಕ್ರಿಕೆಟ್ ಆಟಕ್ಕೆ ಹೆಚ್ಚು ಪ್ರಸಾರ ನೀಡಿ, ಯುವಕರಿಗೆ ಕಿರಿಯ ವಯಸ್ಸಿನಲ್ಲಿ ಕ್ರಿಕೆಟ್‍ನಲ್ಲಿ ಆಸಕ್ತಿ ಕುದುರಿಸಿ ದೇಶದ ಭವಿಷ್ಯ ಕ್ರೀಡಾಪಟುಗಳನ್ನು ರೂಪಿಸುವುದು ಈ ಸ್ಪರ್ಧೆಯ ಉದ್ದೇಶ. ಈ ಪಂದ್ಯಾಟ ನಡೆಯುವುದು ಭಾರತದ ರಾಷ್ಟ್ರೀಯ ಮಟ್ಟದಲ್ಲಿ. ಇದರಲ್ಲಿ ಪೂರ್ವ, ದಕ್ಷಿಣ, ಪಶ್ಚಿಮ, ಕೇಂದ್ರ ಹಾಗೂ ಉತ್ತರ ವಲಯಗಳ ಟೀಮುಗಳು ಭಾಗವಹಿಸುತ್ತವೆ.

	ಅಗ್ರೇಸರತ್ವ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳನ್ನು ಆರಿಸುವುದಕ್ಕೆ ಪೂರ್ವಭಾವಿಯಾಗಿ ಪ್ರತಿವಲಯದಲ್ಲೂ ಅಗ್ರೇಸರತ್ವ ಸ್ಪರ್ಧೆ ನಡೆಯುತ್ತದೆ. ಆಯಾ ವಲಯಗಳಲ್ಲಿರುವ ರಾಜ್ಯಗಳ ತಂಡಗಳು ಅಂತರ ರಾಜ್ಯ ಶಾಲೆಗಳ ಕ್ರಿಕೆಟ್ ಕ್ರೀಡಾ ಸ್ಪರ್ಧೆಯೊಂದರಲ್ಲಿ ಸ್ಪರ್ಧಿಸುತ್ತವೆ. ವಲಯದ ಕ್ರೀಡಾಸ್ಪರ್ಧೆ ಮುಗಿದ ಅನಂತರ ವಲಯದ ರಾಜ್ಯ ಸಂಸ್ಥೆಗಳ ಪ್ರತಿನಿಧಿಗಳಿಂದ ಕೂಡಿದ ಸಮಿತಿ ಕೂಚ್-ಬಿಹಾರ್ ಟ್ರೋಫಿಯಲ್ಲಿ ಆ ವಲಯವನ್ನು ಪ್ರತಿನಿಧಿಸುವ ಪ್ರಾತಿನಿಧಿಕ ತಂಡವನ್ನು ಆರಿಸುತ್ತದೆ.

	ಶಾಲಾಮಟ್ಟದಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಗಳೂ ಇವೆ. ಭಾರತದ ಶಾಲಾ ಬಾಲಕ ತಂಡ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಗಳಲ್ಲಿ ಪ್ರವಾಸಮಾಡಿ ಅಲ್ಲಿಯ ಪ್ರಾತಿನಿಧಿಕ ತಂಡಗಳ ವಿರುದ್ಧ ಬೆಸ್ಟ್ ಪಂದ್ಯಗಳನ್ನೂ ಇತರ ಪಂದ್ಯಗಳನ್ನೂ ಆಡಿದೆ ಅಂತೆಯೇ ಆ ರಾಷ್ಟ್ರಗಳ ತಂಡಗಳು ಭಾರತಕ್ಕೆ ಬಂದು ಕೆಲವು ಪಂದ್ಯಗಳನ್ನು ಆಡಿವೆ.

	ಹಿಂದೆ ಕೂಚ್-ಬಿಹಾರ್ ಟ್ರೋಫಿ ಪಂದ್ಯದಲ್ಲಿ ಆಡಿದ ಹಲವು ಆಟಗಾರರು ಇಂದು ರಾಷ್ಟ್ರದ, ಹಾಗೂ ಹಲವು ರಾಜ್ಯಗಳ ತಂಡಗಳಲ್ಲಿ ಇರುವುದೇ ಇದರ ಉದ್ದೇಶ ಸ್ವಲ್ಪ ಮಟ್ಟಿಗಾದರೂ ಸಾರ್ಥಕವಾಗಿದೆ ಎಂಬುದಕ್ಕೆ ನಿದರ್ಶನ.

(ಎಚ್.ಎಸ್.ಎಸ್.ಎನ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ